Tuesday, October 13, 2009

ಹೊಸದಾಗಿ ಬರೆಯುವ ವರೆಗೆ.. ಹಳೆಯ ಕವನಗಳು

ಹಳೆಯ ಡೈರಿ ತೆಗೆದರೆ ಒಂದಷ್ಟು ಕವನಗಳು ಇಣುಕಿ ನಾ ಮುಂದೆ ತಾ ಮುಂದೆ ಅಂತ ನಿಲ್ಲುತಾವೆ. ಅದರಲ್ಲಿ ಎಲ್ಲಾದರೂ ಬೇರೆ ಕಡೆಯಿಂದ ಆಯ್ದು ಬರೆದಿಟ್ಟ ಕವನಗಳಿದ್ದರೆ ಅಂತ ಸ್ವಲ್ಪ ಹಿಂಜರಿದೆ. ನನಗೆ ಯಂಡಮೂರಿಯವರ ಕಾದಂಬರಿಗಳು ತುಂಬಾ ಇಷ್ಟ ಆಗುತ್ತಿದ್ದವು. ವಂಶಿಯವರ ಅನುವಾದ (ಹಾಗೆ ಹೇಳಬಹುದೋ ಇಲ್ಲವೊ ಗೊತ್ತಿಲ್ಲ), ಅವರ ಭಾಷೆ ತುಂಬಾ ಹಿಡಿಸಿದ್ದವು. ಇದು ಯಾವುದೋ ಕಾದಂಬರಿಯಲ್ಲಿದ್ದದ್ದು -

ನಿನ್ನನ್ನೇ ನಿನ್ನನೇ ನೆನೆಸಿದ್ದು
ನಿದ್ರೆ ಹೋಗದೆ ಎಚ್ಚರವಿದ್ದು
ಕಾದಿದ್ದೇನೆ ನೀನು ಬರುವೆಯೆಂದು
ನೀನು ಬಂದರೆ ಜೀವ ಬರುವುದೆಂದು...

-$-$-#-$-$-#-$-$-#-$-$-#-$-$-#

ಇದನ್ನು ಓದಿ ಪೂರ್ತಿ flat ಆದಮೇಲೆ ನಾನು ಬರೆದದ್ದು:

ಕಾಯುತ್ತಾ ಕಾಯುತ್ತಾ
ಒಣಗಿದ ಮರವಾದೆ
ಅಲುಗದ ಶಿಲೆಯಾದೆ
ನಿನಗೆಂದೇ ಕಣ್ರೆಪ್ಪೆ
ಮುಚ್ಚದೆ ನಿಂದೆ
ನೀ ಬರಲಿಲ್ಲ
ನಿಂತು ಬೇಸರವಾಗಿ
ಒಂದೆರಡು ಹೆಜ್ಜೆ ನಡೆಯ
ಹೊರಟಿರುವೆ ನಾನು
ಬಂದು ಹಿಂದಿರುಗದಿರು
ಓ ನನ್ನ ಗೆಳೆಯ..

-$-$-#-$-$-#-$-$-#-$-$-#

ಬರದಿದ್ದರೆ ಬಾರದಿಹೆಯೆಂಬ ಚಿಂತೆ
ಬಂದರೂ ಎನ್ನ ಮನದಾಳದ
ಊಹೆ ಮಾಡಲಾರೆಯೆಂಬ ಚಿಂತೆ
ಬಂದೂ ಬಾರದಿಹ ಆ ಬಗೆಗಿಂತ
ಬಾರದಿರೆ ಒಳಿತಲ್ಲವೇ?

-$-$-#-$-$-#-$-$-#-$-$-#

ಎರಡು ಅಕ್ಷರ ಬರೆದು
ಮನಸು ಖಾಲಿಯಾಗುತ್ತದೆ
ಎರಡು ಹೆಜ್ಜೆಗೇ
ಕಾಲು ಸೋಲುತ್ತದೆ
ಎರಡು ಮಾತಿಗೇ
ಮಾತು ಬೇಸರವಾಗುತ್ತದೆ
ಸ್ವರವೆರಡರಲ್ಲೇ
ಹಾಡು ಮುಗಿಯುತ್ತದೆ
ಖಾಲಿ ಮನಕ್ಕೆ, ಸೋತ ಕಾಲಿಗೆ
ಮೌನದ ಮಾತಿಗೆ, ಮುಗಿಯುತಿಹ ಹಾಡಿಗೆ
ನಿನ್ನ ನಿರೀಕ್ಷೆಯೇ ಕಾರಣವೆಂದರೆ ನಂಬುತ್ತೀಯ?

-$-$-#-$-$-#-$-$-#-$-$-#

ಸಿಕ್ಕ ಮೇಲೆ ಬರೆದದ್ದು..

ನಿನ್ನ ಕಾಣದೆ ವರುಷಗಳು
ಕಳೆದಿಹೆನು ನಾನು.
ಕಳೆದೆರಡು ದಿನಗಳಲಿ
ಕಂಡು ಜೊತೆಯಾದ ನೀನು
ಕಳೆದೆರಡು ಜನುಮಗಳಷ್ಟು
ಹಳಬನಂತೆ ಕಾಣುವುದೇಕೆ
ಹೇಳು ಗೆಳೆಯ?

old stock ಸ್ವಲ್ಪ ಜಾಸ್ತಿನೇ ಆಯಿತು ಅಂತ ಕಾಣುತ್ತೆ :). ಇವತ್ತಿಗೆ.. ಟಾಟಾ .. ಶುಭ ರಾತ್ರಿ..

No comments:

Post a Comment