Monday, December 6, 2010

ಗೌರವ ಯಾರಿಗೆ ಕೊಡಬೇಕು?

ನಿಮಗೆ ಯಾವತ್ತಾದರೂ ಹೀಗೆ ಅನ್ನಿಸಿದ್ದಿದೆಯೇ? ಸುಮ್ಮನೆ ವಯಸ್ಸಾದ ಮಾತ್ರಕ್ಕೆ ಯಾಕೆ ಯಾರಿಗಾದರೂ ಗೌರವ ಕೊಡಬೇಕು? ವಯಸ್ಸಾದ ಮಾತ್ರಕ್ಕೆ ಅಷ್ಟು ಅನುಭವ ಆಗಿದೆ ಅಂತ ಅರ್ಥವೇ? ಅಥವಾ ಇಷ್ಟು ವಯಸ್ಸಾದಮೇಲೆ ಇವರನ್ನು ಬದಲಿಸಲಿಕ್ಕಾಗೋದಿಲ್ಲ, ಹಿರಿಯರು ಅಂತ ಅವರೇನು ಬಯಸುತ್ತಾರೋ ಹಾಗೆ ಸ್ವಲ್ಪ ನಾಟಕ ಮಾಡೋದು ಅಂತ? ಅಥವಾ ವಯಸ್ಸಾದವರು ಮತ್ತೆ ಮಗುವಾಗುತ್ತಾರೆ. ಅವರ ಸಿಟ್ಟು ಸೆಡವು, ಜಗಳ ಎಲ್ಲವನ್ನೂ ಮರೆತು ಮಗುವಿನಂತೆ ಅಂತ ಕ್ಷಮಿಸಿ ಬಿಡೋದ? ನಿನ್ನೆ ನಾನು ಕಂಡ ಅಜ್ಜಿ, ಇವತ್ತಿನ ಅಪ್ಪ, ಮಾವ, ನಾಳೆ ನಾನು.. ಒಂದು ದಿನ ಹೀಗೆ ಆಗುವವರೆ.. ಹೋಗಲಿ ಬಿಡು ಅಂತ ಸಮಾಧಾನ ಮಾಡಿಕೊಳ್ಳೋದ?

ನನಗೆ ಚಿಕ್ಕ ವಯಸ್ಸಿನಿಂದಲೂ ಒಂದು ಅಭ್ಯಾಸ. ಅಪ್ಪನ ಬಳಿ ಇದರಿಂದಾಗಿ ಬೆಲ್ಟ್ ನಲ್ಲಿ, ಲಕ್ಕಿ ಬರಲಿನಲಿ, ಜೋಯಿಸಜ್ಜನ ಕೋಲಿನಲ್ಲಿ ಹೊಡೆತ ತಿಂದಿದ್ದಿದೆ. ವಯಸ್ಸಾದ ಮಾತ್ರಕ್ಕೆ ಯಾರಾದರೂ ಏನಾದರೂ ಹೇಳಿದರೆ ಒಪ್ಪಿಕೊಳ್ಳೋದು ಆಗುತ್ತಿರಲಿಲ್ಲ. ನನ್ನ ಈ ನಿಲುವಿನಲ್ಲಿ ಇವತ್ತಿಗೂ ಬದಲಾವಣೆ ಇಲ್ಲ. ಆದರೆ ವಯಸ್ಸಾದವರಿಗೆ ನನಗೇ ಗೊತ್ತಿಲ್ಲದೇ ಒಂದಿಷ್ಟು ರಿಯಾಯಿತಿ ಕೊಡುತ್ತೇನೆ. ಚೆನ್ನಾಗಿ ನೋಡಿಕೊಳ್ಳಬೇಕು, ಸರಿ. ಪ್ರೀತಿಯಿಂದ ಕಾಣಬೇಕು - ಸರಿ. ಆದರೆ ಹರೆಯದಲ್ಲೇ ಹೊಂದಾಣಿಕೆ ಅಂತ ನನ್ನ ಸ್ವಂತಿಕೆ, ಸ್ವಾಭಿಮಾನ ಬಿಡಬೇಕಾದರೆ? ಸರಿಯೇ? ನಿಮ್ಮಿಂದ ಸಾಧ್ಯವೇ? ನನಗಿದು ಬಹಳ ಕಷ್ಟ. ಇವತ್ತು ನನ್ನವರು ಅಂತ ಗೌರವಿಸಿದವರ ನಾಲಿಗೆ ಸ್ವಲ್ಪ ಹದ್ದುಮೀರಿ ಮಾತಾಡಿದೆ. ಒಂದು ಕಣ್ಣು ಇನ್ನೊಂದು ಕಣ್ಣಿಗೆ ತಿವಿದ ಹಾಗೆ. ಮನಸ್ಸು ಸರಿಯಿಲ್ಲ. ಕ್ಷಮಿಸಿ. ನನ್ನ ಪ್ರಶ್ನೆಗಳು ಪ್ರಶ್ನೆಗಳೇ. ಇದಕ್ಕೆ ಯಾರೂ ಉತ್ತರ ಕೊಡೋಕಾಗುವುದಿಲ್ಲ. ನಮ್ಮ ಸಂಸ್ಕಾರ, ನಮ್ಮ ಸಂಸ್ಕೃತಿ ಅಂತ ಬಗ್ಗುವವರು ಬಗ್ಗುತ್ತಲೇ ಇರುತ್ತಾರೆ. ಮೆರೆಯುವವರು ಮೆರೆಯುತ್ತಲೇ ಇರುತ್ತಾರೆ. ಇದಕ್ಕೆ ವಯಸ್ಸಿನ ಮಾನದಂಡವಿಲ್ಲ. ಅದೂಕೂಡ ಕೆಲವೊಮ್ಮೆ ಜನರ ಕೈಯಲ್ಲಿನ ಅಸ್ತ್ರವಾಗುತ್ತದೆ.