Saturday, February 12, 2011

ಸೂರ್ಯಾಸ್ತಮಾನದ ಖುಷಿ..

ಸಣ್ಣ ಪುಟ್ಟ ಖುಷಿಗಳು ಅನ್ನೋ ಮಾತನ್ನು ಹುಡುಗೀರ ಬಾಯಲ್ಲಿ, ಅಥವಾ ಸ್ವಲ್ಪ emotional ಹುಡುಗರ ಬಾಯಲ್ಲಿ ಒಂದಲ್ಲ ಒಂದು ದಿನ ಕೇಳಿಯೇ ಇರುತ್ತೀರ ಅಂತ ನಂಗೆ ಗೊತ್ತು. ಹೀಗಂದ್ರೆ ಏನು? ಖುಷಿ ಸಣ್ಣ ಪುಟ್ಟದ್ದೆ ಅಥವಾ ಸಣ್ಣ ಪುಟ್ಟ ಕೆಲಸಗಳಿಂದ ಉಂಟಾಗೋ ದೊಡ್ಡ ಖುಷಿಯೇ ಅಂತ ಒಂದೊಂದ್ಸಾರಿ ನನಗೂ ಅನ್ನಿಸೋದಿದೆ.

ನಮ್ಮ ಆಫೀಸಿನ ದೊಡ್ಡ ಕಟ್ಟಡಗಳ ಒಳಗೆ ಬಂಧಿಯಾಗಿರೋ ನನಗೆ ಸಂಜೆ 6:15 ಕ್ಕೆ ಹೊರಡೋದಂದ್ರೆ ಖುಷಿ. ಅದ್ಯಾಕೆ ಅಂತೀರ? ಮೆಟ್ಟಿಲನ್ನು ಇಳಿಯುವಾಗ ಒಂದು ದೊಡ್ಡ ಕಿಟಕಿ ಇದೆ. ದೇವರ ದಯದಿಂದ ಅದನ್ನೂ ಕೂಡ ಮರೆ ಮಾಡಬೇಕು ಅಂತ ನಮ್ಮ ಆಫೀಸಿನವರಿಗೆ ಅನ್ನಿಸಿಲ್ಲ. ಆ ದೊಡ್ಡ ಕಿಟಕಿಯಿಂದ ಸೂರ್ಯಾಸ್ತಮಾನ ಎಷ್ಟು ಚೆನ್ನಾಗಿ ಕಾಣುತ್ತೆ ಅಂತೀರ? ಅದು ಕಿತ್ತಳೆ ಬಣ್ಣ ಅಲ್ಲ, ಕೆಂಪಲ್ಲ, ಸುತ್ತ ಮುತ್ತಲಿನ ಬಣ್ಣ ನೀಲಿಯಲ್ಲ, ಕಪ್ಪಲ್ಲ.. ಒಂದೈದು ನಿಮಿಷ ನಿಂತು ನೋಡೋಣ ಅನ್ನಿಸುತ್ತೆ. ಆಹಾ.. ಎಂತಹ ಅದ್ಭುತ ದೃಶ್ಯ ಅಂತ ಒಂಥರಾ ಖುಷಿ ಆಗುತ್ತೆ. ಇದನ್ನು ಸೆರೆ ಹಿಡಿಯೋ camera ನನ್ನಲ್ಲಿಲ್ವಲ್ಲ ಅಂತ ಪೇಚಾಡೋ ಹಾಗೆ ಆಗುತ್ತೆ. ಮತ್ತೆ ಅದರ ಹಿಂದೆಯೇ camera ಇದ್ದರೆ ಈ ದೃಶ್ಯವನ್ನು ನೋಡುವುದನ್ನು ಬಿಟ್ಟು ಹೇಗೆ ಫೋಟೋ ತೆಗೆಯೋದು ಅಂತ ಇಷ್ಟು ಚೆಂದದ ಸಮಯ ಹಾಳು ಮಾಡುತ್ತಿದ್ದೆ ಅನ್ನಿಸುತ್ತೆ. ನನಗೇ ಇದನ್ನು ಹೀಗೇ ಚಿತ್ರ ಬಿಡಿಸಿ ಹೀಗೆ ಬಣ್ಣ ತುಂಬಲು ಬಂದಿದ್ದರೆ!! ಅಂತ ಆಸೆಯಾಗುತ್ತೆ. ನನಗೆ ಬರುವುದಿಲ್ಲವಾದರೂ, ನಮ್ಮ ಹರಿಣಿಗೆ ತೋರಿಸಿದರೆ, ಆ ಚಿತ್ರ ಕಲಾವಿದೆ ಹೀಗೆ ಒಂದು ನಕಲು ತಯಾರು ಮಾಡುತ್ತಿದ್ದಳೋ ಏನೋ ಅಂತಲೂ ಅನ್ನಿಸುತ್ತೆ. ಒಂದೊಂದು ಮಹಡಿಯಿಂದಲೂ ಇಳಿಯುವ ಹೊತ್ತಿಗೆ ಸೂರ್ಯ ಒಂದೊಂದೇ ಇಂಚಿನಷ್ಟು ಇಳಿಯುತ್ತಾನೆ. ಕಡೆಯ ಕೆಲವು ಮಹಡಿಯಲ್ಲಿ ಕಿಟಕಿ ಇಲ್ಲ :(. ಕೆಳಗೆ ಬರುವ ಹೊತ್ತಿಗೆ ಸೂರ್ಯ ಮರೆಯಾಗಿರ್ತಾನೆ. ನಿಜವಾಗಿಯೂ ಮುಳುಗಿದನೋ, ಅಥವಾ ದೂರದ ಒಂದು ಕಾಂಕ್ರೀಟು ಕಟ್ಟಡ ಅವನನ್ನು ಮರೆಸಿತೋ ಅಂತ ಗೊತ್ತಿಲ್ಲ.

ದಿನವಿಡೀ ಹೊರಗಡೆ ಜೋರಾಗಿರೋ ಬಿಸಿಲಿದ್ದರೂ, ಒಳಗೆ ಸಂಪೂರ್ಣ ಕತ್ತಲೆ ಮಾಡಿಕೊಂಡು, ಕಿಟಕಿಗಳಿಗೆ ಮರೆ ಮಾಡಿ, ಕೃತಕ ಬೆಳಕಿನಲ್ಲಿ, ಗಾಳಿಯಾಡದಂತೆ ಮಾಡಿ A.C. ಹಾಕಿರೋ ಚಿಕ್ಕ 2 X 3 cubicle ನಲ್ಲಿ ಜೀವನವಿಡೀ ಕೆಲಸ ಮಾಡಿ, ಸಮಯ ಕಳೆಯುವ ನನ್ನಂತಹ ಜನರಿಗೆ ಹೀಗೊಂದು ಸೂರ್ಯಾಸ್ತವು ದಿನವೂ ಇರುವಂಥದೇ ಆದರೂ ಕೂಡ ಬಹಳ ದೊಡ್ಡ ಖುಷಿ ಕೊಡುತ್ತದೆ.

ಮೊನ್ನೆ ನಮ್ಮ ಆಫೀಸಿನ ಎದುರಿಗೆ ಇನ್ನೊಂದು ಕಟ್ಟಡ ಕಟ್ಟಲು ತಯಾರಿ ನಡೆಯೋದನ್ನು ನೋಡಿದೆ :(. ಹೊಸ ಕಟ್ಟಡ ಈ ಸುಂದರ ದೃಶ್ಯವನ್ನು ಮರೆ ಮಾಡದಿರಲಿ ಅಂತ ದೇವರಲ್ಲಿ ಬೇಡಿಕೊಳ್ತಿದೀನಿ!!!