Tuesday, April 12, 2011

ಪಶ್ಚಾತ್ತಾಪ ಅಂದರೆ..

ಕೆಲವು ದಿನಗಳಿಂದ ನಾನು ಮನೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಪುಸ್ತಕದ ಹುಚ್ಚಿಗೆ ನೀರೆರೆದಂತೆ, ನನಗೆ ಬೇಕಾದ ಪುಸ್ತಕಗಳನ್ನು ನನ್ನ ಗಂಡ ತಂದು ಕೊಡುತ್ತಾರೆ. ಕೆಲಸವಿಲ್ಲದ ಸಮಯದಲ್ಲಿ ಪುಸ್ತಕಗಳನ್ನು ಓದುವುದು, ಹೊಸ ದೇವರ ನಾಮಗಳನ್ನು ಕಲಿಯುವುದು.. ಹೀಗೆ ಸಮಯ ಕಳೆಯುತ್ತೇನೆ. ನಮ್ಮ ಮಾವನವರು ನಿವೃತ್ತ ಸರ್ಕಾರಿ ಅಧಿಕಾರಿಗಳು. ಅವರು ಮುಂಗೋಪ, ನಿಯತ್ತಿಗೆ ನಮ್ಮ ನೆಂಟರಿಷ್ಟರಲ್ಲಿ ಪ್ರಸಿದ್ದರು. ಸಣ್ಣ ತಪ್ಪು ತಿಳುವಳಿಕೆ ಹೇಗೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ ಅನ್ನುವದನ್ನು ಹೇಳುವಾಗ ಈ ಕಥೆ ಹೇಳಿದರು. ಅವರ ಮಾತಿನಲ್ಲಿ ಹೇಳೋದಾದರೆ -

ಒಮ್ಮೆ ನನ್ನ ಸಹೋದ್ಯೋಗಿಗೂ ನನಗೂ ಒಂದು ಕೆಲಸದ ಬಗ್ಗೆ ವಾಗ್ವಾದ ನಡೆಯಿತು. ಅವರು ಆ ಕೆಲಸವನ್ನು ಮಾಡಬೇಕೆಂದು ನಾನೂ, ನಾನು ಆ ಕೆಲಸ ಮಾಡಬೇಕೆಂದು ಅವರೂ ಪಟ್ಟು ಹಿಡಿದಿದ್ದೆವು. ನಾನು ಹಿಂದೂ, ಅವರು ಮುಸ್ಲಿಂ. ನಾವೆಲ್ಲರೂ ಬಹಳಷ್ಟು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಮತ - ಧರ್ಮಗಳ ಬಗ್ಗೆ ಬೇಧ ಭಾವಗಳಿರುತ್ತಿರಲಿಲ್ಲ. ಅಣ್ಣ ತಮ್ಮಂದಿರಂತೆ ಇರುತ್ತಿದ್ದ ನಮಗೆ ಎಂದೂ ಜಾತಿ, ಮತಗಳ ಕಾರಣದಿಂದ ಕಿತ್ತಾಟ ಮಾಡುವ ಸಂಭಾವನೆಯೇ ಇರುತ್ತಿರಲಿಲ್ಲ. ಅಂದು ಮಾತನಾಡುತ್ತಿರುವಾಗ ಅವರು "ನೀವು ಜಾತಿ ಬುದ್ದಿ ತೋರಿಸುತ್ತಿದ್ದೀರಿ" ಅಂದರು. ನನ್ನ ಮುಂಗೋಪಕ್ಕೆ ಕಡಿವಾಣ ಹಾಕುವಾವರು ಯಾರು? ಸಿಟ್ಟಿನಿಂದ ಅವರ ಕಾಲರನ್ನು ಹಿಡಿದು ನಮ್ಮ ಮೇಲಧಿಕಾರಿಗಳ ಬಳಿ ಕರೆದುಕೊಂಡು ಹೋದೆ. ಸದಾ ಒಂದಾಗಿ ಕೆಲಸ ಮಾಡುತ್ತಾ, ನಮ್ಮಷ್ಟಕ್ಕೆ ಇರುತ್ತಿದ್ದ ನಾವು ಹೀಗಾಗಿದ್ದು ನೋಡಿ ಉಳಿದವರೆಲ್ಲ ಗಾಬರಿಗೊಂಡಿದ್ದರು. ನಮ್ಮ ಮೇಲಧಿಕಾರಿಗಳು ಗಾಬರಿಗೊಂಡರೂ, ನನ್ನಿಂದ ನನ್ನ ಸ್ನೇಹಿತರನ್ನು ಬಿಡಿಸಿ ಎರಡು ದಿನದ ನಂತರ ಮಾತನಾಡೋಣ ಎಂದು ಸಮಾಧಾನ ಹೇಳಿದರು.

ಮರು ದಿನ ಪಕ್ಕದ ಆಫೀಸಿನಲ್ಲಿ ಕೆಲಸ ಮಾಡುವವರೊಬ್ಬರು ನನ್ನನ್ನು ಹುಡುಕಿಕೊಂಡು ಬಂದರು. "ಸಾರ್, ಜೋಪಾನವಾಗಿರಿ. ಎಲ್ಲ ಮುಸ್ಲಿಂ ಜನರೂ ಒಂದಾಗಿ ನಿಮ್ಮನ್ನು ಹೊಡೆಯಬೇಕೆಂದು ತೀರ್ಮಾನ ಮಾಡಿಕೊಂಡಿದ್ದಾರೆ. ಯೋಚನೆ ಮಾಡಬೇಡಿ. ನಾವೆಲ್ಲಾ ನಿಮಗೆ support ಮಾಡುತ್ತೀವಿ" ಅಂದರು. ನಾನು ಸುಮ್ಮನೆ ಉಳಿದೆ. ಅವರೂ ಏನೂ ಪ್ರತಿಕ್ರಿಯೆ ಸಿಗದಿದ್ದರಿಂದ ಹೊರಟು ಹೋದರು. ನನಗೆ ಶುರುವಾಯಿತು tension. ನನ್ನಿಂದ ಒಂದು ಹಿಂದೂ - ಮುಸ್ಲಿಂ ಗಲಾಟೆಯಾಗಬಹುದೆಂಬ ಕಲ್ಪನೆಯೇ ಭಯಂಕರವಾಗಿತ್ತು. ಮರುದಿನ ಬೆಳಿಗ್ಗೆ ದೇವರಿಗೆ ನಮಸ್ಕಾರ ಮಾಡಿ ನನ್ನ ಮುಸ್ಲಿಂ ಗೆಳೆಯರ ಹತ್ತಿರ ಹೋದೆ. ಅವರಿರಲಿಲ್ಲ. ಆ ದಿನ ಗಲಾಟೆಯಾಗುವಾಗ , ಅಲ್ಲಿ ಇನ್ನೊಬ್ಬ ಸಹೋದ್ಯೋಗಿಯಿದ್ದರು. ಅವರ ಬಳಿ ಹೋಗಿ ಮಾತನಾಡಿದರೆ ನಮ್ಮ ಜಗಳದ ಇನ್ನೊಂದು version ಸಿಗಬೇಕೆ? ನನ್ನ ಜೊತೆ ವಾದ ಮಾಡುವಾಗ ಅವರು ಹೇಳಿದ್ದು "ಜಾಸ್ತಿ ಬುದ್ದಿ" ಎಂದು, "ಜಾತಿ ಬುದ್ದಿ" ಎಂದಲ್ಲ. ನಾನು ಅವರ ಉರ್ದು ಮಿಶ್ರಿತ ಭಾಷೆಯನ್ನೂ ತಪ್ಪಾಗಿ ತಿಳಿದಿದ್ದೆ ಅಂದಾಗ ನನ್ನ ಮನಃಸ್ಥಿತಿಯನ್ನು ಊಹಿಸಿಕೊಳ್ಳಿ!!

ನನ್ನ ಸ್ನೇಹಿತರು ಬಂದ ನಂತರ ಅವರಲ್ಲಿ ಕ್ಷಮೆಯಾಚಿಸಿದೆ. ಅವರೂ ಇದನ್ನು ಮರೆತು ಬಿಡುವ ದೊಡ್ಡ ಮನಸ್ಸಿನವರಾಗಿದ್ದರಿಂದ ಒಂದು ದೊಡ್ಡ ಗಲಾಟೆ ತಪ್ಪಿ ಹೋಯಿತು. ನನಗೆ ಅವರೆಲ್ಲ ಸೇರಿ ಹೊಡೆದಿದ್ದರೆ ನನಗೆ ತೊಂದರೆಯಿಲ್ಲ. ಆದರೆ ಅದು ಅಣ್ಣ ತಮ್ಮಂದಿರಂತಿರುವ ನಮ್ಮ ಸಹೋದ್ಯೋಗಿಗಳಲ್ಲಿ ದ್ವೇಷದ ಬೀಜ ಬಿತ್ತಿದರೆ ಅನ್ನುವ ಭೀತಿ ಹೇಗಿರುತ್ತದೆ ಗೊತ್ತೇ? ಅದಕ್ಕೆ ಅಲ್ಲವೇ ದೊಡ್ಡವರು ಹೇಳಿರುವುದು - "ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು " ಅಂತ.

ಎಷ್ಟು ನಿಜ ಅಲ್ಲವೇ? pradigm shift ಅನ್ನುವುದರ ಬಗ್ಗೆ email ಫಾರ್ವರ್ಡ್ ಗಳು ಬರುತ್ತಲೇ ಇರುತ್ತವೆ. ಇದೂ ಕೂಡ ಅಂಥದ್ದೊಂದು ಕಥೆ ಅನ್ನಿಸಿತು. ಬರೆದೆ. ನೀವೇನನ್ನುತ್ತೀರ?