Wednesday, July 20, 2016

ಹೊಸ ಹಾದಿಯಲ್ಲಿ.. ಹಳೆಯ ಕನಸುಗಳನ್ನು ನನಸಾಗಿಸುತ್ತಾ..

ಈ ಕನಸು ಅನ್ನುವ ಪದವೇ ಒಂಥರಾ ಚೆಂದ. ಎಷ್ಟು ಬಾರಿ ಬಿದ್ದರೂ ಮತ್ತೆ ನಗುತ್ತಾ ಏಳುವ   ಮಗುವಿನ ಹಾಗೆ ಈ ಕನಸುಗಳೂ ಅಷ್ಟೇ .. ಮುರಿದರೂ ಹೊಸ ರೂಪದಲ್ಲಿ ಬರುತ್ತಲೇ ಇರುತ್ತವೆ. ಅದೇ ತಾನೇ ನಮ್ಮಲ್ಲಿನ ಜೀವನೋತ್ಸಾಹದ ಮೂಲ!!

ನನ್ನ ಬದುಕು ಅನ್ನೋದು ಕೆಲಸ, ಕಾರ್ಪೊರೇಟ್ ಪ್ರಪಂಚ ಇವೆಲ್ಲದರ ಮಧ್ಯೆ ಸಿಕ್ಕಿ ನಲುಗಿದೆ ಎಂದು ಕೊರೆಯುತ್ತಿದ್ದ ನಾನು ನನಗೇ ಸಿಗದಷ್ಟು ಬ್ಯುಸಿಯಾಗಿದ್ದು ಹೌದು. ಆದರೆ ಇದು ಕೊರಗನ್ನುಂಟುಮಾಡುವಂತಹುದಲ್ಲ. ಹೊಸ ಹೊಸ ಪ್ರಯೋಗ, ಹೊಸ ಹೊಸ ಕಲಿಕೆ, ಹೊಸ ಹೊಸ ದಾರಿ, ಹೊಸ ಪ್ರಯಾಣ .. ಒಂದು ಬಗೆಯ ಉತ್ಸಾಹ ಉಂಟುಮಾಡುವ ಬದುಕು. ನಿನ್ನ ಸಮಯ ನಮಗಾಗಿಯೂ ಮೀಸಲಿಡು ಎಂದು ಗಲಾಟೆ ಮಾಡುವ ಕುಟುಂಬ ವರ್ಗ ಮತ್ತು ಸ್ನೇಹಿತರು.. ಆದರೂ ಖುಷಿ.. 

೩ ವರ್ಷಗಳ ಆಪ್ತ ಸಲಹೆ (counselling) , ಲೆಕ್ಕವಿಡಲಾರದಷ್ಟು ಜನರ ಜೊತೆ ಅವರ ಸುಖ ದುಃಖ ಹಂಚಿಕೊಳ್ಳುವ ಅವಕಾಶ ತಂದಿದೆ. ಎಲ್ಲರ ಬದುಕಿನಲ್ಲೂ ನೋವು ನಲಿವು ಇರುವುದು ಸಹಜ. ಆದರೆ ನಾವು ನಮ್ಮ ಬದುಕನ್ನೇ ಒಂದು ಪ್ರಪಂಚ ಅಂದುಕೊಂಡಾಗ ಕಡ್ಡಿ ಗುಡ್ಡವಾಗುತ್ತದೆ. ನನ್ನ ಈ ಹೊಸ ಪ್ರಪಂಚದಲ್ಲಿ ನನ್ನಷ್ಟು ದುಃಖ ಇರುವವರೇ ಇಲ್ಲ ಅನ್ನುವ ಭಾವನೆ ಮಾಯವಾಗಿ ಆ ಜಾಗದಲ್ಲಿ ಎಲ್ಲರಂತೆ ನಾನೂ ಎನ್ನುವ ಭಾವನೆ ಬಲವಾಗುತ್ತದೆ. ಜೊತೆಗೆ ಎಲ್ಲರದ್ದೂ ಒಂದು ಪ್ರಪಂಚವಿದೆ. ಅದರಲ್ಲಿ ಅವರೂ ಕಷ್ಟ ಪಡುತ್ತಿರಬಹುದು, ನಾನು ಯಾವ ರೀತಿಯಲ್ಲಿ ಅವರ ಬದುಕಿನಲ್ಲಿ ಬದಲಾವಣೆ ತರಬಲ್ಲೆ ಎಂಬ ಪ್ರಶ್ನೆ ನನಗೆ ಅರಿವಿಲ್ಲದೆ ಮೂಡಿ ಬರುತ್ತದೆ. ಟ್ರಾನ್ಸಾಕ್ಷನಲ್ ಅನಾಲಿಸಿಸ್ (TA) ಎಂಬ ಒಂದು ಹೊಸ ಕಲಿಕೆಯಂತೂ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದೆ ಎಂದರೂ ತಪ್ಪಾಗಲಾರದು.  

ನೀವೇ ಓದಿ. "ಎಂಥ ಧನಾತ್ಮಕ ಅಂಶ ಇದು" ಎಂದು ನಿಮಗೆ ಅನ್ನಿಸದಿದ್ದರೆ ಹೇಳಿ.  ಪ್ರಪಂಚ ಇರೋದೇ ಹೀಗೆ. ಯಾರೂ ಬದಲಾಗೋಲ್ಲ ಅನ್ನುವ ನಮಗೆ ಹೊಸ ಬಗೆಯ ಯೋಚನೆಯ ಎಳೆಯನ್ನು ತೋರಿಸುತ್ತದೆ ಈ Transactional Analysis (TA). 

ಪ್ರತಿಯೊಬ್ಬರೂ ಯೋಚಿಸಬಲ್ಲರು 
ಪ್ರತಿಯೊಬ್ಬರೂ ಬದಲಾಗಬಲ್ಲರು