Showing posts with label old poem - dediated to my husband.... Show all posts
Showing posts with label old poem - dediated to my husband.... Show all posts

Thursday, October 1, 2009

ನಿನ್ನ ಪ್ರೀತಿ ...

ಮುಸ್ಸಂಜೆಯಾಗುತ್ತಿರುವಂತೆ
ಮನದೊಳಗಣ ಉತ್ಸಾಹ
ನೂರ್ಮಡಿಯಾಗಿ
ಉಲ್ಲಾಸ ಒಳಗೆಲ್ಲ ಪಸರಿಸಿ
ಮುಗಿಲ ತಾಕುವಾಸೆಯಾಗಿ
ಜಿಗಿಯುತಿರುವೆನು..

ಕೈಗೆ ಸಿಗದ ಮುಗಿಲ ಮೇಲೆ
ಬೇಸರವಿಲ್ಲ..
ಇಂದಲ್ಲ ನಾಳೆ, ಹೆಚ್ಚು
ಎತ್ತರಕೆ ಜಿಗಿದಾಗ
ಕೈತಾಕಿದಷ್ಟು ಮೋಡವ
ಬಾಚಿ ಮುಡಿಗೆ ಏರಿಸುವೆನು ನಾನು..

ರಾತ್ರಿಯಲಿ ಬಾನೊಡಲಲ್ಲಿ
ಸಹಸ್ರ ನಕ್ಷತ್ರಗಳು ಸೇರಿ
ಮಿನುಗುವಾಗ ನಿನ್ನ ಕಣ್ಣು ಕಂಡೀತೆಂದು
ಅರಸುತ್ತೇನೆ ನಾನು..

ನಿದ್ದೆಯಿಂದೆದ್ದು ಮೈ ಮುರಿದರೆ
ಸೂರ್ಯ ಕಣ್ ಮಿಟುಕಿಸಿ ನಗುತ್ತಾನೆ
ನಿನ್ನದೇ ನಗು ತೇಲಿ ಬಂದಂತಾಗಿ
ಮೆಲುನಗುತ್ತೇನೆ ...

ನನ್ನೆಲ್ಲ ಆಯಾಸ ಮೂಲೆಗುಂಪಾಗಿ
ನನ್ನೊಳಗಿನ ಚೈತನ್ಯ ನೂರ್ಮಡಿಯಾಗಲು
ನೀನು ಕಾರಣವೇ?
ನಿನ್ನೊಳಗಿನ ಪ್ರೀತಿ ಕಾರಣವೇ?