ಈ ಜಗದ ಗಂಧ ಪರಿ ಪರಿ ಹಸಿವ ಕೆಣಕುತಿರೆ
ಭೋಜನವ ನೀಡೆನೆನೆ ಮನ ಸುಮ್ಮನಿಹುದೆ?
ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ
ರಾಜಯೋಗದು ಉಪಾಯ - ಮಂಕುತಿಮ್ಮ||೩೭೪||
Youtube link: https://youtu.be/QX7cI4e4YJk
ತಾತ್ಪರ್ಯ:
ಪ್ರಕೃತಿಯು ಮನುಷ್ಯನ ಮನಸ್ಸನ್ನು ಪ್ರಚೋದಿಸುವ ವಿಧವಿಧವಾದ ಪ್ರಲೋಭನೆಗಳನ್ನು ಸೃಷ್ಟಿಯಲ್ಲಿರಿಸಿದ್ದಾಳೆ. ಅವುಗಳನ್ನು ಅನುಭವಿಸಿ ಅವುಗಳಿಗೆ ವಶವಾಗಬಾರದೆಂಬುದೇ ಹಠಯೋಗ. ಒಳಗೆ ಆಸೆಯನ್ನು ಅದುಮಿಟ್ಟುಕೊಂಡು ಹೊರಗೆ ವಿರಕ್ತಿಯನ್ನು ತೋರಿಸುವುದು ಸೋಗಲಾಡಿತನವೆನಿಸಿಕೊಳ್ಳುತ್ತದೆ. ಅವುಗಳನ್ನು ಬಲವಂತವಾಗಿ ಹಿಡಿತದಲ್ಲಿಟ್ಟುಕೊಳ್ಳುವುದಕ್ಕಿಂತ ಮನುಷ್ಯನಲ್ಲಿ ಸಹಜವಾಗಿ ನೆಲೆಯಾಗಿರುವ ಪ್ರವೃತ್ತಿಗಳನ್ನು ಇತಿಮಿತಿಯಲ್ಲಿ ಅನುಭವಿಸಿ ಎಂದು ಬೋಧಿಸುವ ರಾಜಯೋಗವೇ ಒಳಿತು.ನನ್ನ ಅನಿಸಿಕೆ:
ಅತಿಯಾದ ಯಾವುದೇ ಆದರೂ ಮನುಷ್ಯನನ್ನು ತಪ್ಪು ಹಾದಿಗೆ ಕರೆದೊಯ್ಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಅತಿ ಅಥವಾ ಕಡಿಮೆ ಆಹಾರ, ಅತಿ ನಿದ್ರೆ ಅಥವಾ ಕಡಿಮೆ ನಿದ್ರೆ.. ಅಷ್ಟೇ ಏಕೆ.. ಅತಿಯಾದ ಕೆಲಸ ಅಥವಾ ಸಂಪೂರ್ಣ ವಿಶ್ರಾಂತಿ.. ಹೀಗೆ ಯಾವುದೇ ಸಮತೋಲನವಿಲ್ಲದ ಕೆಲಸ ಒಳ್ಳೆಯ ಫಲಿತಾಂಶವನ್ನು ಕೊಡಲು ಸಾಧ್ಯವಿಲ್ಲ. ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರ ಎಂದು ಎಲ್ಲರೂ ಹೇಳುವುದು ಇದೇ ಕಾರಣಕ್ಕಲ್ಲವೇ?
ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ತಿಳಿಸಿ.
No comments:
Post a Comment