Thursday, April 23, 2026

ಬಹುವಿದ್ಯೆ ಬಹುತರ್ಕ -ಮಂಕುತಿಮ್ಮನ ಕಗ್ಗ _ ೭೪೨

 


ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |

ವಹಿಸೆ ಜೀವನಭರವನದು ಹಗುರೆನಿಪವೊಲ್ ||

ಸಹನೆ ಸಮರಸಭಾವವಂತಃಪರೀಕ್ಷೆಗಳು |

ವಿಹಿತವಾತ್ಮದ ಹಿತಕೆ - ಮಂಕುತಿಮ್ಮ||

ಡಿವಿಜಿಯವರ ಮಂಕುತಿಮ್ಮನ ಕಗ್ಗ _ ೭೪೨

ತಾತ್ಪರ್ಯ: ಜೀವನವನ್ನು ನಡೆಸಿಕೊಂಡು ಹೋಗುವ ಭಾರವು ಹಗುರವೆನಿಸಲು,  ಹೆಚ್ಚಿನ ವಿದ್ಯೆಯಾಗಲೀ ತರ್ಕವಾಗಲೀ ಅಥವಾ ನಿಯಮಗಳನ್ನಾಗಲೀ ,   ಅನುಸರಿಸುವ ಅಗತ್ಯವಿಲ್ಲ.  ಅದಕ್ಕೆ ಬೇಕಾಗಿರುವುದು ಸಹನೆ,  ಎಲ್ಲರೊಡನೆ  ಸಹಬಾಳ್ವೆ ಹಾಗೂ ನಾವು ಮಾಡಿರುವ ಆಲೋಚನೆಗಳು ಹಾಗೂ ಕಾರ್ಯಗಳು ಸರಿಯೇ ತಪ್ಪೇ  ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವ ಅಭ್ಯಾಸ. ಇದು ಆತ್ಮದ ಹಿತಕ್ಕೆ ಒಳ್ಳೆಯದು ಅಥವಾ  ವಿಹಿತವಾದದ್ದು

ಬಹಳಷ್ಟು ಬಾರಿ ಇವುಗಳನ್ನು ಓದಿದಾಗ ಹೊಸ ಲಹರಿ  ತಾನಾಗಿಯೇ  ಹುಟ್ಟಿಬರುತ್ತದೆ.  ನಿಮ್ಮ ಅನಿಸಿಕೆಗಳನ್ನು ಬರೆಯಿರಿ.

#ಬಹುವಿದ್ಯೆಬಹುತರ್ಕ#ಮಂಕುತಿಮ್ಮನಕಗ್ಗ  #kagga742 #bahuvidyebahutarka




ಚಕ್ರ ತಿರುಗೀ ತಿರುಗೀ ..

ಚಕ್ರ ತಿರುಗೀ ತಿರುಗೀ ಮತ್ತೆ ಮೊದಲ ಜಾಗಕ್ಕೆ  ಬರುವ ಹಾಗೆ ಪ್ರಪಂಚವೆಲ್ಲ ಸುತ್ತಿ, ಮೊದಲು ಕಂಡ ಕನಸಿನ ಬುಡಕ್ಕೆ  ಬರುತ್ತೀವಂತೆ. ಅದು   ಸತ್ಯವಾಗುತ್ತಿದೆ ಅನಿಸುತ್ತದೆ.

ಹಾಡು ಕೇಳುವುದು, ಹಾಡು ಹೇಳುವುದು, ಹಾಡು ಕಲಿಸುವುದು ಒಂದು ಹುಚ್ಚು. ಸಂಗೀತ ಕಲಿಯಲು ಸರಿಯಾದ ಸಮಯಕ್ಕೆ, ಸರಿಯಾದ ಗುರುಗಳು ಸಿಕ್ಕ ಬೇಕಾದರೆ ಒಂದು ಅದೃಷ್ಟ.  ಬಹಳ ಸಮಯದ ನಂತರ ಅಂತಹ ಒಬ್ಬರು ಗುರುಗಳು ಸಿಕ್ಕಿ ಒಂದಷ್ಟು ದೂರ ಪ್ರಯಾಣ  ಮಾಡಿದ್ದುಂಟು. ಕ್ರಮಿಸಬೇಕಾದ ದಾರಿ ಬಹಳಷ್ಟು ಇದೆ. ಬಂದಷ್ಟನ್ನು ಕೆಲವೊಬ್ಬರಿಗೆ ದಾಟಿಸುವ ಆಸೆ. ಯಾವಾಗ ಇರುತ್ತೇವೋ,  ಹೇಗೆ ಇರುತ್ತೇವೆಯೋ,  ಎಷ್ಟು ಸಮಯ  ಇರುತ್ತೇವೆಯೋ ಯಾರಿಗೂ ತಿಳಿದಿಲ್ಲ. ಇದ್ದಾಗ ಇದ್ದುದನ್ನು ಇನ್ನೊಬ್ಬರಿಗೆ ಹಂಚಿದರೆ ಬರುವ ಮಜಾ ಬೇರೆ. 

ಕೌನ್ಸೆಲಿಂಗ್, ಆಕ್ಯುಪ್ರೆಶರ್ ಜೊತೆ  ಹಿಂದೆಂದೋ   ಕಂಡ  ಹಾಡು ಕಲಿಸುವ  ಕೆಲಸವೂ ಸೇರಿದೆ. ಎರಡು ತಂಡಗಳಿಗೆ ಒಂದಷ್ಟು ಹಾಡನ್ನು ಹೇಳಿಕೊಟ್ಟಿದ್ದಾಗಿದೆ. ಮನಸ್ಸಿಗೆ ತುಂಬಾ ತೃಪ್ತಿ ಕೊಡುವ ಕೆಲಸ ಅದು. 

ಮಂಕುತಿಮ್ಮನ ಕಗ್ಗ ಓದಬೇಕು, ಕಲಿಯಬೇಕು ಎನ್ನುವ ಆಸೆ ಬಹಳ ಸಮಯದಿಂದ ಹಾಗೆ ಉಳಿದಿತ್ತು. ಹೊಸ ಪ್ರಾಜೆಕ್ಟ್ - ವಾರಕ್ಕೊಂದು ಕಗ್ಗ. 

 ಪ್ರತಿವಾರವೂ ಕಡೆಯ ಪಕ್ಷ ಒಂದು ಕಗ್ಗ ಕಲಿಯುವ ಪ್ರಯತ್ನ. ಓದಿದಾಗ ಯಾವ ರಾಗ-ಭಾವ  ಸೇರುತ್ತದೆಯೋ ಅದರಲ್ಲೇ ಹಾಡಿ ಹಂಚುವ ಪ್ರಯತ್ನ. ಹೆಚ್ಚು ಅಲಂಕಾರವಿಲ್ಲದೆ ಯೂಟ್ಯೂಬ್ ನಲ್ಲಿ ಹಾಡಿದ್ದನ್ನು ಹಾಕುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ, ನಿಮ್ಮ ಸಲಹೆಯನ್ನು ದಯವಿಟ್ಟು ತಿಳಿಸಿ..

ಲಿಂಕ್ ಇಲ್ಲಿದೆ : 

 

For those who cannot understand Kannada, Mankutimmana kagga is a set of 945 of pearls of wisdom. People call it as essence of Bhagavad Gita. D.V. Gundappa, popularly known as DVG has authored the book. The language is slightly difficult to understand as it has halegannada or old kannada style of writing.   But each of the kagga or poem has wonderful meaning to learn, to understand and implement in our lives. I am trying to learn one poem a week. I use the tune that comes to my mind while learning and share on my Youtube channel Bhaavasethu. There will be no decoration done on the video as the words and the meanings from each of the kagga / mukthaka carry jewels themselves. 

#varakkondukagga #dvg #kaggakali #bhaavasethu

Wednesday, January 28, 2026

ಧಾವಂತವೇನಿಲ್ಲ ಗುರಿ ಸೇರಲು..

 ಒಂದಿಷ್ಟು ವರ್ಷಕ್ಕೊಮ್ಮೆ ಮರುಜನ್ಮ ಬರುತ್ತಂತೆ. ಹಾಗೆ ಒಂದಷ್ಟು ವರ್ಷದ ನಂತರ ಮತ್ತೆ ಬರೆಯುವ ಹುಚ್ಚು ಬಂದಿದೆ. ಭೂಮಿ ಗುಂಡಗಿದೆಯಂತೆ. ಹೇಗೆ ಹೋದರೂ ಮತ್ತೆ ತಿರುಗಿ ಅಲ್ಲಿಗೆ ಬರ್ತೀವಂತೆ. ಈ ವಿಚಾರ ಮತ್ತೆ ಮತ್ತೆ ನಿಜವಾಗ್ತಿದೆ. ಹಾಡು ಹೇಳಿ ಕೊಡುವ ಶಿಬಿರ, ಆಪ್ತ ಸಲಹೆ ಸಮಾಧಾನ, ಆಕ್ಯುಪ್ರೆಷರ್ ಕಲಿಕೆ ಹಾಗೂ ಚಿಕಿತ್ಸೆ ಎಲ್ಲವನ್ನೂ -ಸಂಕಲ್ಪ ಫಾರ್ ಚೇಂಜ್  ಅನ್ನುವ, ನನ್ನ ಸ್ನೇಹಿತೆ ಪ್ರಾರಂಭಿಸಿರುವ NGO ನಲ್ಲಿ ಮಾಡ್ತಾ ಇದ್ದೀನಿ. ಬದುಕಿನ ವಿವಿಧ ಘಟ್ಟದಲ್ಲಿ ಹುಟ್ಟಿಕೊಂಡಿದ್ದ ಆಸೆಗಳು ಈಗ ಸಾಕಾರವಾಗುತ್ತಾ ಇವೆ. ಧಾವಂತವಿಲ್ಲದೆ ದಶಕದ ನಂತರ ಬರೆದ ಕವನ-


ಧಾವಂತವೇನಿಲ್ಲ ಗುರಿ ಸೇರಲು

ಮುಗಿಯದಾ ಪಯಣವಿದು  ನಿಡುಸುಯ್ಯಲು ||


ಗುರಿಯ ಮೊಳಕೆಯದು

ಮೊಳೆತ ಬಗೆ ಹೇಗೆ?

ಇಂದಿನ ಘಟ್ಟವನು

ತಲುಪಿದ್ದು ಹೇಗೆ?

ನನ್ನೆಲ್ಲಾ ಕನಸಿನಲಿ

ಒಳಗೊಂಡು ದೇವ

ಮುಂದಿನ ದಾರಿಯನು

ತೋರುವನು ಎನಗೆ ||೧||


ಹುಲ್ಲು ಮೊಳೆಯದ 

ಒಣಕು ನೆಲದಲ್ಲಿ

ಹಚ್ಚನೆಯ ಹಸಿರು  

ತೋಟವದು ಹೇಗೆ ?

ಕನಸು ಕಾಣುವುದು 

ಮರೆತ ಮನದಲ್ಲಿ

ಉಕ್ಕುಕ್ಕಿ ಬರುತಲಿದೆ

ಸಿಹಿಗನಸು ಹೀಗೆ..||೨||


ಒಂದು ಎರಡಲ್ಲ

ನೂರಾರು ಜನುಮದಲಿ

ಮತ್ತೆ ಮತ್ತೆ ನೆಡೆದ 

ಕಾಲ್ದಾರಿ  ಇಹುದು

ಪ್ರತಿಯೊಂದು ಜನುಮದಲಿ

ಕೆಲ ಹೆಜ್ಜೆ ನೆಡೆಯುತ

ಗಮ್ಯವಿದು ಸನಿಹಕ್ಕೆ

 ಬಂದಿಹುದು ನೋಡ..||೩||

Wednesday, July 20, 2016

ಹೊಸ ಹಾದಿಯಲ್ಲಿ.. ಹಳೆಯ ಕನಸುಗಳನ್ನು ನನಸಾಗಿಸುತ್ತಾ..

ಈ ಕನಸು ಅನ್ನುವ ಪದವೇ ಒಂಥರಾ ಚೆಂದ. ಎಷ್ಟು ಬಾರಿ ಬಿದ್ದರೂ ಮತ್ತೆ ನಗುತ್ತಾ ಏಳುವ   ಮಗುವಿನ ಹಾಗೆ ಈ ಕನಸುಗಳೂ ಅಷ್ಟೇ .. ಮುರಿದರೂ ಹೊಸ ರೂಪದಲ್ಲಿ ಬರುತ್ತಲೇ ಇರುತ್ತವೆ. ಅದೇ ತಾನೇ ನಮ್ಮಲ್ಲಿನ ಜೀವನೋತ್ಸಾಹದ ಮೂಲ!!

ನನ್ನ ಬದುಕು ಅನ್ನೋದು ಕೆಲಸ, ಕಾರ್ಪೊರೇಟ್ ಪ್ರಪಂಚ ಇವೆಲ್ಲದರ ಮಧ್ಯೆ ಸಿಕ್ಕಿ ನಲುಗಿದೆ ಎಂದು ಕೊರೆಯುತ್ತಿದ್ದ ನಾನು ನನಗೇ ಸಿಗದಷ್ಟು ಬ್ಯುಸಿಯಾಗಿದ್ದು ಹೌದು. ಆದರೆ ಇದು ಕೊರಗನ್ನುಂಟುಮಾಡುವಂತಹುದಲ್ಲ. ಹೊಸ ಹೊಸ ಪ್ರಯೋಗ, ಹೊಸ ಹೊಸ ಕಲಿಕೆ, ಹೊಸ ಹೊಸ ದಾರಿ, ಹೊಸ ಪ್ರಯಾಣ .. ಒಂದು ಬಗೆಯ ಉತ್ಸಾಹ ಉಂಟುಮಾಡುವ ಬದುಕು. ನಿನ್ನ ಸಮಯ ನಮಗಾಗಿಯೂ ಮೀಸಲಿಡು ಎಂದು ಗಲಾಟೆ ಮಾಡುವ ಕುಟುಂಬ ವರ್ಗ ಮತ್ತು ಸ್ನೇಹಿತರು.. ಆದರೂ ಖುಷಿ.. 

೩ ವರ್ಷಗಳ ಆಪ್ತ ಸಲಹೆ (counselling) , ಲೆಕ್ಕವಿಡಲಾರದಷ್ಟು ಜನರ ಜೊತೆ ಅವರ ಸುಖ ದುಃಖ ಹಂಚಿಕೊಳ್ಳುವ ಅವಕಾಶ ತಂದಿದೆ. ಎಲ್ಲರ ಬದುಕಿನಲ್ಲೂ ನೋವು ನಲಿವು ಇರುವುದು ಸಹಜ. ಆದರೆ ನಾವು ನಮ್ಮ ಬದುಕನ್ನೇ ಒಂದು ಪ್ರಪಂಚ ಅಂದುಕೊಂಡಾಗ ಕಡ್ಡಿ ಗುಡ್ಡವಾಗುತ್ತದೆ. ನನ್ನ ಈ ಹೊಸ ಪ್ರಪಂಚದಲ್ಲಿ ನನ್ನಷ್ಟು ದುಃಖ ಇರುವವರೇ ಇಲ್ಲ ಅನ್ನುವ ಭಾವನೆ ಮಾಯವಾಗಿ ಆ ಜಾಗದಲ್ಲಿ ಎಲ್ಲರಂತೆ ನಾನೂ ಎನ್ನುವ ಭಾವನೆ ಬಲವಾಗುತ್ತದೆ. ಜೊತೆಗೆ ಎಲ್ಲರದ್ದೂ ಒಂದು ಪ್ರಪಂಚವಿದೆ. ಅದರಲ್ಲಿ ಅವರೂ ಕಷ್ಟ ಪಡುತ್ತಿರಬಹುದು, ನಾನು ಯಾವ ರೀತಿಯಲ್ಲಿ ಅವರ ಬದುಕಿನಲ್ಲಿ ಬದಲಾವಣೆ ತರಬಲ್ಲೆ ಎಂಬ ಪ್ರಶ್ನೆ ನನಗೆ ಅರಿವಿಲ್ಲದೆ ಮೂಡಿ ಬರುತ್ತದೆ. ಟ್ರಾನ್ಸಾಕ್ಷನಲ್ ಅನಾಲಿಸಿಸ್ (TA) ಎಂಬ ಒಂದು ಹೊಸ ಕಲಿಕೆಯಂತೂ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದೆ ಎಂದರೂ ತಪ್ಪಾಗಲಾರದು.  

ನೀವೇ ಓದಿ. "ಎಂಥ ಧನಾತ್ಮಕ ಅಂಶ ಇದು" ಎಂದು ನಿಮಗೆ ಅನ್ನಿಸದಿದ್ದರೆ ಹೇಳಿ.  ಪ್ರಪಂಚ ಇರೋದೇ ಹೀಗೆ. ಯಾರೂ ಬದಲಾಗೋಲ್ಲ ಅನ್ನುವ ನಮಗೆ ಹೊಸ ಬಗೆಯ ಯೋಚನೆಯ ಎಳೆಯನ್ನು ತೋರಿಸುತ್ತದೆ ಈ Transactional Analysis (TA). 

ಪ್ರತಿಯೊಬ್ಬರೂ ಯೋಚಿಸಬಲ್ಲರು 
ಪ್ರತಿಯೊಬ್ಬರೂ ಬದಲಾಗಬಲ್ಲರು 

Saturday, November 17, 2012

New beginning.. New life..

I was thinking of quitting IT and doing something that I like.. for last few years. Thanks to my husband who just accepted my decision to leave a job that gives good money and a lot of luxuries (except time for myself ;) ) .

I have joined a Diploma course in counselling that touches different types of counselling and gives practical exposure to counselling. Its been more than 4 months that I have been part of this course and lot of things have happened since then. 

After joining this course, I have seen a different world and I am liking the idea of "going slow" in almost everything.. As per our Institute Head and learned faculty Dr. Ali, we have to unlearn lot of things to really learn new things and make those lessons, a part of our lives. Delayed gratification means a lot and I am understanding that now. It's Road less traveled.

I joined a part time job as library executive initially, but couldn't continue for more than 3 months as I was getting into the "hectic schedule" again. Now, I'm having lot of time - visited my native, spent some time with parents, most of the days, will be at home when my husband returns home and when he leaves to office, read what I like, Got in touch with my friends again, have my morning Tea on terrace - without taking my mobile along with me, be at home during sunset, spend some time with myself alone - in silence.

All these have cost me something for sure. Its less money in Bank, no hiring Auto unless its emergency or necessity, no shopping unless I really need to replace some dress, Restrict my expenditure, Travel in Public transport - BMTC even if its crowded (like good old days :) ), some insecurity about future, not planning to buy site / house, no new gadgets....  But, I AM IN LOVE WITH WHAT I AM DOING. I think I can touch more lives. Some day I might have to return to IT to earn some money, but my PRESENT is really Pleasant :D.

Wednesday, July 13, 2011

Learning something new...

I am learning something new ... after all these months of boring self analysis and search for things that makes me happy, I have taken up a new course on lay counseling. I am attending counseling classes. Its for non-psychiatry background and pamphlet says it helps us know ourselves better, have harmony with people around, help people in need by becoming volunteers or lay counselors. Though the course doesn't make us professional counselors, I think it helps us understand the actions and reactions of people & self better...

I am done with 3 classes already. First class was taken by Mr. Dilip Patel who explained the framework of the course and do's & dont's. Second class was taken by Dr. Vijay Kumar who gave us overview of brain and its functions that would help us understand few problems we might come across, when we get into counseling people. He suggested a book - "Phantoms in the brain" by V.S. Ramachandran. I have bought the book and yet to read. 3rd class was by Prof. Vijayambika who gave us the importance of having "doses of Psychology" in everyone's life. So far, so good. I loved to make a career in Psychology which didn't materialze due to various reasons. "Why do people behave the way they do.." is the question I have always thought about. If this course can help me get the answers to those questions or at least show me the path, it would be wonderful. What say?

Tuesday, April 12, 2011

ಪಶ್ಚಾತ್ತಾಪ ಅಂದರೆ..

ಕೆಲವು ದಿನಗಳಿಂದ ನಾನು ಮನೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಪುಸ್ತಕದ ಹುಚ್ಚಿಗೆ ನೀರೆರೆದಂತೆ, ನನಗೆ ಬೇಕಾದ ಪುಸ್ತಕಗಳನ್ನು ನನ್ನ ಗಂಡ ತಂದು ಕೊಡುತ್ತಾರೆ. ಕೆಲಸವಿಲ್ಲದ ಸಮಯದಲ್ಲಿ ಪುಸ್ತಕಗಳನ್ನು ಓದುವುದು, ಹೊಸ ದೇವರ ನಾಮಗಳನ್ನು ಕಲಿಯುವುದು.. ಹೀಗೆ ಸಮಯ ಕಳೆಯುತ್ತೇನೆ. ನಮ್ಮ ಮಾವನವರು ನಿವೃತ್ತ ಸರ್ಕಾರಿ ಅಧಿಕಾರಿಗಳು. ಅವರು ಮುಂಗೋಪ, ನಿಯತ್ತಿಗೆ ನಮ್ಮ ನೆಂಟರಿಷ್ಟರಲ್ಲಿ ಪ್ರಸಿದ್ದರು. ಸಣ್ಣ ತಪ್ಪು ತಿಳುವಳಿಕೆ ಹೇಗೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ ಅನ್ನುವದನ್ನು ಹೇಳುವಾಗ ಈ ಕಥೆ ಹೇಳಿದರು. ಅವರ ಮಾತಿನಲ್ಲಿ ಹೇಳೋದಾದರೆ -

ಒಮ್ಮೆ ನನ್ನ ಸಹೋದ್ಯೋಗಿಗೂ ನನಗೂ ಒಂದು ಕೆಲಸದ ಬಗ್ಗೆ ವಾಗ್ವಾದ ನಡೆಯಿತು. ಅವರು ಆ ಕೆಲಸವನ್ನು ಮಾಡಬೇಕೆಂದು ನಾನೂ, ನಾನು ಆ ಕೆಲಸ ಮಾಡಬೇಕೆಂದು ಅವರೂ ಪಟ್ಟು ಹಿಡಿದಿದ್ದೆವು. ನಾನು ಹಿಂದೂ, ಅವರು ಮುಸ್ಲಿಂ. ನಾವೆಲ್ಲರೂ ಬಹಳಷ್ಟು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಮತ - ಧರ್ಮಗಳ ಬಗ್ಗೆ ಬೇಧ ಭಾವಗಳಿರುತ್ತಿರಲಿಲ್ಲ. ಅಣ್ಣ ತಮ್ಮಂದಿರಂತೆ ಇರುತ್ತಿದ್ದ ನಮಗೆ ಎಂದೂ ಜಾತಿ, ಮತಗಳ ಕಾರಣದಿಂದ ಕಿತ್ತಾಟ ಮಾಡುವ ಸಂಭಾವನೆಯೇ ಇರುತ್ತಿರಲಿಲ್ಲ. ಅಂದು ಮಾತನಾಡುತ್ತಿರುವಾಗ ಅವರು "ನೀವು ಜಾತಿ ಬುದ್ದಿ ತೋರಿಸುತ್ತಿದ್ದೀರಿ" ಅಂದರು. ನನ್ನ ಮುಂಗೋಪಕ್ಕೆ ಕಡಿವಾಣ ಹಾಕುವಾವರು ಯಾರು? ಸಿಟ್ಟಿನಿಂದ ಅವರ ಕಾಲರನ್ನು ಹಿಡಿದು ನಮ್ಮ ಮೇಲಧಿಕಾರಿಗಳ ಬಳಿ ಕರೆದುಕೊಂಡು ಹೋದೆ. ಸದಾ ಒಂದಾಗಿ ಕೆಲಸ ಮಾಡುತ್ತಾ, ನಮ್ಮಷ್ಟಕ್ಕೆ ಇರುತ್ತಿದ್ದ ನಾವು ಹೀಗಾಗಿದ್ದು ನೋಡಿ ಉಳಿದವರೆಲ್ಲ ಗಾಬರಿಗೊಂಡಿದ್ದರು. ನಮ್ಮ ಮೇಲಧಿಕಾರಿಗಳು ಗಾಬರಿಗೊಂಡರೂ, ನನ್ನಿಂದ ನನ್ನ ಸ್ನೇಹಿತರನ್ನು ಬಿಡಿಸಿ ಎರಡು ದಿನದ ನಂತರ ಮಾತನಾಡೋಣ ಎಂದು ಸಮಾಧಾನ ಹೇಳಿದರು.

ಮರು ದಿನ ಪಕ್ಕದ ಆಫೀಸಿನಲ್ಲಿ ಕೆಲಸ ಮಾಡುವವರೊಬ್ಬರು ನನ್ನನ್ನು ಹುಡುಕಿಕೊಂಡು ಬಂದರು. "ಸಾರ್, ಜೋಪಾನವಾಗಿರಿ. ಎಲ್ಲ ಮುಸ್ಲಿಂ ಜನರೂ ಒಂದಾಗಿ ನಿಮ್ಮನ್ನು ಹೊಡೆಯಬೇಕೆಂದು ತೀರ್ಮಾನ ಮಾಡಿಕೊಂಡಿದ್ದಾರೆ. ಯೋಚನೆ ಮಾಡಬೇಡಿ. ನಾವೆಲ್ಲಾ ನಿಮಗೆ support ಮಾಡುತ್ತೀವಿ" ಅಂದರು. ನಾನು ಸುಮ್ಮನೆ ಉಳಿದೆ. ಅವರೂ ಏನೂ ಪ್ರತಿಕ್ರಿಯೆ ಸಿಗದಿದ್ದರಿಂದ ಹೊರಟು ಹೋದರು. ನನಗೆ ಶುರುವಾಯಿತು tension. ನನ್ನಿಂದ ಒಂದು ಹಿಂದೂ - ಮುಸ್ಲಿಂ ಗಲಾಟೆಯಾಗಬಹುದೆಂಬ ಕಲ್ಪನೆಯೇ ಭಯಂಕರವಾಗಿತ್ತು. ಮರುದಿನ ಬೆಳಿಗ್ಗೆ ದೇವರಿಗೆ ನಮಸ್ಕಾರ ಮಾಡಿ ನನ್ನ ಮುಸ್ಲಿಂ ಗೆಳೆಯರ ಹತ್ತಿರ ಹೋದೆ. ಅವರಿರಲಿಲ್ಲ. ಆ ದಿನ ಗಲಾಟೆಯಾಗುವಾಗ , ಅಲ್ಲಿ ಇನ್ನೊಬ್ಬ ಸಹೋದ್ಯೋಗಿಯಿದ್ದರು. ಅವರ ಬಳಿ ಹೋಗಿ ಮಾತನಾಡಿದರೆ ನಮ್ಮ ಜಗಳದ ಇನ್ನೊಂದು version ಸಿಗಬೇಕೆ? ನನ್ನ ಜೊತೆ ವಾದ ಮಾಡುವಾಗ ಅವರು ಹೇಳಿದ್ದು "ಜಾಸ್ತಿ ಬುದ್ದಿ" ಎಂದು, "ಜಾತಿ ಬುದ್ದಿ" ಎಂದಲ್ಲ. ನಾನು ಅವರ ಉರ್ದು ಮಿಶ್ರಿತ ಭಾಷೆಯನ್ನೂ ತಪ್ಪಾಗಿ ತಿಳಿದಿದ್ದೆ ಅಂದಾಗ ನನ್ನ ಮನಃಸ್ಥಿತಿಯನ್ನು ಊಹಿಸಿಕೊಳ್ಳಿ!!

ನನ್ನ ಸ್ನೇಹಿತರು ಬಂದ ನಂತರ ಅವರಲ್ಲಿ ಕ್ಷಮೆಯಾಚಿಸಿದೆ. ಅವರೂ ಇದನ್ನು ಮರೆತು ಬಿಡುವ ದೊಡ್ಡ ಮನಸ್ಸಿನವರಾಗಿದ್ದರಿಂದ ಒಂದು ದೊಡ್ಡ ಗಲಾಟೆ ತಪ್ಪಿ ಹೋಯಿತು. ನನಗೆ ಅವರೆಲ್ಲ ಸೇರಿ ಹೊಡೆದಿದ್ದರೆ ನನಗೆ ತೊಂದರೆಯಿಲ್ಲ. ಆದರೆ ಅದು ಅಣ್ಣ ತಮ್ಮಂದಿರಂತಿರುವ ನಮ್ಮ ಸಹೋದ್ಯೋಗಿಗಳಲ್ಲಿ ದ್ವೇಷದ ಬೀಜ ಬಿತ್ತಿದರೆ ಅನ್ನುವ ಭೀತಿ ಹೇಗಿರುತ್ತದೆ ಗೊತ್ತೇ? ಅದಕ್ಕೆ ಅಲ್ಲವೇ ದೊಡ್ಡವರು ಹೇಳಿರುವುದು - "ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು " ಅಂತ.

ಎಷ್ಟು ನಿಜ ಅಲ್ಲವೇ? pradigm shift ಅನ್ನುವುದರ ಬಗ್ಗೆ email ಫಾರ್ವರ್ಡ್ ಗಳು ಬರುತ್ತಲೇ ಇರುತ್ತವೆ. ಇದೂ ಕೂಡ ಅಂಥದ್ದೊಂದು ಕಥೆ ಅನ್ನಿಸಿತು. ಬರೆದೆ. ನೀವೇನನ್ನುತ್ತೀರ?