Wednesday, January 28, 2026

ಧಾವಂತವೇನಿಲ್ಲ ಗುರಿ ಸೇರಲು..

 ಒಂದಿಷ್ಟು ವರ್ಷಕ್ಕೊಮ್ಮೆ ಮರುಜನ್ಮ ಬರುತ್ತಂತೆ. ಹಾಗೆ ಒಂದಷ್ಟು ವರ್ಷದ ನಂತರ ಮತ್ತೆ ಬರೆಯುವ ಹುಚ್ಚು ಬಂದಿದೆ. ಭೂಮಿ ಗುಂಡಗಿದೆಯಂತೆ. ಹೇಗೆ ಹೋದರೂ ಮತ್ತೆ ತಿರುಗಿ ಅಲ್ಲಿಗೆ ಬರ್ತೀವಂತೆ. ಈ ವಿಚಾರ ಮತ್ತೆ ಮತ್ತೆ ನಿಜವಾಗ್ತಿದೆ. ಹಾಡು ಹೇಳಿ ಕೊಡುವ ಶಿಬಿರ, ಆಪ್ತ ಸಲಹೆ ಸಮಾಧಾನ, ಆಕ್ಯುಪ್ರೆಷರ್ ಕಲಿಕೆ ಹಾಗೂ ಚಿಕಿತ್ಸೆ ಎಲ್ಲವನ್ನೂ -ಸಂಕಲ್ಪ ಫಾರ್ ಚೇಂಜ್  ಅನ್ನುವ, ನನ್ನ ಸ್ನೇಹಿತೆ ಪ್ರಾರಂಭಿಸಿರುವ NGO ನಲ್ಲಿ ಮಾಡ್ತಾ ಇದ್ದೀನಿ. ಬದುಕಿನ ವಿವಿಧ ಘಟ್ಟದಲ್ಲಿ ಹುಟ್ಟಿಕೊಂಡಿದ್ದ ಆಸೆಗಳು ಈಗ ಸಾಕಾರವಾಗುತ್ತಾ ಇವೆ. ಧಾವಂತವಿಲ್ಲದೆ ದಶಕದ ನಂತರ ಬರೆದ ಕವನ-


ಧಾವಂತವೇನಿಲ್ಲ ಗುರಿ ಸೇರಲು

ಮುಗಿಯದಾ ಪಯಣವಿದು  ನಿಡುಸುಯ್ಯಲು ||


ಗುರಿಯ ಮೊಳಕೆಯದು

ಮೊಳೆತ ಬಗೆ ಹೇಗೆ?

ಇಂದಿನ ಘಟ್ಟವನು

ತಲುಪಿದ್ದು ಹೇಗೆ?

ನನ್ನೆಲ್ಲಾ ಕನಸಿನಲಿ

ಒಳಗೊಂಡು ದೇವ

ಮುಂದಿನ ದಾರಿಯನು

ತೋರುವನು ಎನಗೆ ||೧||


ಹುಲ್ಲು ಮೊಳೆಯದ 

ಒಣಕು ನೆಲದಲ್ಲಿ

ಹಚ್ಚನೆಯ ಹಸಿರು  

ತೋಟವದು ಹೇಗೆ ?

ಕನಸು ಕಾಣುವುದು 

ಮರೆತ ಮನದಲ್ಲಿ

ಉಕ್ಕುಕ್ಕಿ ಬರುತಲಿದೆ

ಸಿಹಿಗನಸು ಹೀಗೆ..||೨||


ಒಂದು ಎರಡಲ್ಲ

ನೂರಾರು ಜನುಮದಲಿ

ಮತ್ತೆ ಮತ್ತೆ ನೆಡೆದ 

ಕಾಲ್ದಾರಿ  ಇಹುದು

ಪ್ರತಿಯೊಂದು ಜನುಮದಲಿ

ಕೆಲ ಹೆಜ್ಜೆ ನೆಡೆಯುತ

ಗಮ್ಯವಿದು ಸನಿಹಕ್ಕೆ

 ಬಂದಿಹುದು ನೋಡ..||೩||